Bapu Padmanmabha Flute and Mantra Meditation

*ನ ನಾದೇನ ವಿನಾ ಗೀತ೦ ನ ನಾದೇನ ವಿನಾ ಸ್ವರಹ !*
*ನ ನಾದೇನ ವಿನಾ ನೃತ್ಯ೦ ತಸ್ಮಾನ್ನಾದಾತ್ಮಕ೦ ಜಗತ್ !!*
There is No Song without the Nada,
Nor Music Without it ;
Without Nada there is No Dance.
Indeed the Whole Creation itself is Nada.

ಬಾಪುವಿಗೆ-ಮುರುಳಿಯ-ಕರೆ

VFS_5460ಕನ್ನಡಿಗ ಬಾಪು ಪದ್ಮನಾಭ್ ಧ್ಯಾನ ಸಂಗೀತ ಮತ್ತು ನಾದ ಚಿಕಿತ್ಸೆಯ (ಹೀಲಿಂಗ್) ಸಂಗೀತಯಾನದ ಮೂಲಕ ದೇಶದ ಗಡಿದಾಟಿರುವ ಕೊಳಲು ವಾದಕ. ಅವರ ಸಂಗೀತದ ‘ಮ್ಯೂಸಿಕ್ ಆ್ಯಸ್‌ ಥೆರಪಿ’ಯ ನಾಲ್ಕು ವಾಲ್ಯೂಮ್‌ಗಳನ್ನು ದೇಶದ ವಿದೇಶಾಂಗ ಇಲಾಖೆಯು ಭಾರತಕ್ಕೆ ಬರುವ ವಿದೇಶಿಗರಿಗೆ ಉಡುಗೊರೆಯಾಗಿ ನೀಡುತ್ತಿದೆ. ಬಾಪು ಅವರ ಸಂಗೀತದ ಆಲಾಪಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿ. ಆ್ಯಪಲ್‌ನ ಟಾಪ್ ಹತ್ತು ಸಂಗೀತಗಳಲ್ಲಿ ಪದ್ಮನಾಭ್ ಅವರ ಸಂಗೀತ ಸ್ವರಕ್ಕೆ ಐದು ವರುಷಗಳಿಂದಲೂ ಸ್ಥಾನವಿದೆ.

ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯ ಅವರ ಶಿಷ್ಯ ಪದ್ಮನಾಭ್, ಗುರುವಿನಿಂದ ವಿದ್ಯೆ ಕಲಿತದ್ದಷ್ಟೇ ಅಲ್ಲ, ವಿದ್ಯಾರ್ಥಿ ವೇತನವನ್ನು ಕೂಡ ಪಡೆದುಕೊಂಡವರು. ವಿದೇಶಗಳಲ್ಲೂ ಗುರುತಾಗಿರುವ ಈ ಸಂಗೀತಗಾರನ ಮೂಲ ತುಡಿತ ಹಳ್ಳಿಯತ್ತ. ಎಂಟು ವರುಷಗಳ ಹಿಂದೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆರಂಭಿಸಿದ ‘ಅಂತರ್ ದನಿ’ ಸಂಸ್ಥೆಯ ಮೂಲಕ ಉತ್ತರ ಕರ್ನಾಟಕದ ಹಳ್ಳಿಗಾಡಿನ ಮಕ್ಕಳಲ್ಲಿ ಸಂಗೀತದ ಅಭಿರುಚಿ ಬಿತ್ತುತ್ತಿದ್ದಾರೆ. ಮುಖ್ಯವಾಗಿ ಒತ್ತಡದ ಬದುಕನ್ನು ಹಗುರಗೊಳಿಸಿ ಮನಸ್ಸನ್ನು ತೇಲಿಸುವುದು ಅವರ ಸಂಗೀತಯಾನದ ಮುಖ್ಯ ಉದ್ದೇಶ. ಇಂತಿಪ್ಪ ಬಾಪು ಮೊದಲ ಬಾರಿಗೆ ಸಿನಿಮಾಕ್ಕೆ ಸಂಗೀತ ನೀಡುವ ಮನಸ್ಸು ಮಾಡಿದ್ದಾರೆ. ಅದೂ ನಾಗಾಭರಣ ಅವರ ‘ಅಲ್ಲಮ’ ಚಿತ್ರಕ್ಕೆ. ಅವರ ಸ್ವರ ಧ್ಯಾನ–ಯಾನದ ಮಾತುಗಳ ಬುತ್ತಿಯನ್ನು ಇಲ್ಲಿ ಬಿಚ್ಚಿದ್ದಾರೆ.

*ಮುರುಳಿ (ಕೊಳಲು) ನಿಮ್ಮನ್ನು ಕರೆದ ಕ್ಷಣ ಮತ್ತು ಹಿನ್ನೆಲೆ ಬಗ್ಗೆ ಹೇಳಿ?
ಹೊಸಪೇಟೆಯಲ್ಲಿ ಎಂಜಿನಿಯರಿಂಗ್ ಓದುತ್ತಿದ್ದೆ. ಹಳ್ಳಿಯ ಜಾತ್ರೆಯೊಂದರಲ್ಲಿ ಕೊಳಲು ಕೊಂಡು ನುಡಿಸಿದೆ. ಸ್ವರಗಳು ಬಂದಹಾಗೆ ಆಯಿತು. ನನ್ನ ಅಜ್ಜ ಭೀಮ್‌ರಾವ್ ಹಾರ್ಮೋನಿಯಂ ನುಡಿಸುತ್ತಿದ್ದರು. ಆರಂಭದಲ್ಲಿ ಹರಿಪ್ರಸಾದ್ ಚೌರಾಸಿಯಾ ಅವರ ಕ್ಯಾಸೆಟ್‌ಗಳನ್ನು ಕೇಳಿಕೊಂಡು ಅಭ್ಯಾಸ ನಡೆಸಿದೆ. 1999ರಲ್ಲಿ ಮುಂಬೈನಲ್ಲಿ ಅವರನ್ನು ಭೇಟಿಯಾಗಿ ಅವರ ಮುಂದೆ ಹಾಡಿದೆ; ‘ನಾನೇ ಹೇಳಿಕೊಡುವೆ’ ಎಂದರು. ಅಲ್ಲಿಂದ ನನ್ನ ಸಂಗೀತ ಯಾನ ಆರಂಭವಾಯಿತು. ಪುಣೆಯ ಇಂಡಿಯನ್ ಫಿಲ್ಮ್‌್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಿದೆ. ಓಶೋ ಸಮಾಧಿಯಲ್ಲಿ ಕಛೇರಿ ಕೊಡುವಾಗ ಒಂದು ಗಂಟೆ ದೀರ್ಘವಾಗಿ ಕಣ್ಣೀರಿಟ್ಟಿದ್ದೇನೆ. ಆಗಲೇ ಅನಿಸಿತು, ಸಂಗೀತ ಮನರಂಜನೆಯನ್ನು ಮೀರಿದ್ದು ಎಂದು. ಆ ದಿಸೆಯಲ್ಲಿ ಹೊಸ ಬಗೆಯಲ್ಲಿ ತೆರೆದುಕೊಳ್ಳುವ ಪ್ರಯತ್ನ ಮಾಡಿದೆ. ಆಗ ಕಂಡಿದ್ದೇ ಮೆಡಿಟೇಶನ್ ಮತ್ತು ಹೀಲಿಂಗ್ (ನಾದ ಚಿಕಿತ್ಸೆ) ಮ್ಯೂಸಿಕ್‌. ಎಂಜಿನಿಯರಿಂಗ್ ಓದಿ ಆರು ತಿಂಗಳು ಕೆಲಸ ಮಾಡಿದೆ. ಇದು ನನ್ನದಲ್ಲದ ಕ್ಷೇತ್ರ ಎನಿಸಿದ ತಕ್ಷಣ ಉದ್ಯೋಗ ತೊರೆದೆ.

*ದೇಶದ ವಿದೇಶಾಂಗ ಇಲಾಖೆ ನಿಮ್ಮ ಸಂಗೀತವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹಿನ್ನೆಲೆ ತಿಳಿಸಿ?
‘ಕಲೆ ಮುಖಾಂತರ ಸಂಬಂಧ’ ಎನ್ನುವ ಪರಿಕಲ್ಪನೆ ಅದು. ಆರು ವರುಷಗಳ ಹಿಂದೆ ‘ಮ್ಯೂಸಿಕ್‌ ಆ್ಯಸ್‌ ಥೆರಪಿ, ಮೆಡಿಟೇಶನ್’ ಎನ್ನುವ ನಾಲ್ಕು ವಾಲ್ಯೂಮ್‌ಗಳನ್ನು ಆಯ್ಕೆ ಮಾಡಲಾಗಿದೆ. ನಾಲ್ಕರಲ್ಲೂ ನಾಲ್ಕು ರೀತಿಯ ಶೈಲಿ ಇದೆ. ಆಧುನಿಕತೆ ಮತ್ತು ಅಧ್ಯಾತ್ಮವಿದ್ದು, ಇದನ್ನು ವೈಜ್ಞಾನಿಕವಾಗಿ ಹೇಳಿದ್ದೇನೆ.

*ಪ್ರತಿಕ್ರಿಯೆ ಹೇಗಿದೆ? 
ಉತ್ತಮವಾಗಿಯೇ ಇದೆ. ವಿದೇಶೀಯರು ಈ ವಾಲ್ಯೂಮ್‌ಅನ್ನು ಇಷ್ಟಪಟ್ಟಿದ್ದಾರೆ. ವಿದೇಶಗಳಲ್ಲೂ ಕಛೇರಿ ನೀಡಿದ್ದೇನೆ. ಜನರು ಮೆಚ್ಚಿದ್ದಾರೆ.

ಕೊಳಲು ಕೊಡಿಸಿದ ಗುರು

ಹರಿಪ್ರಸಾದ್ ಚೌರಾಸಿಯ ಅವರನ್ನು ಭೇಟಿಯಾದಾಗ ಎಂಜಿನಿಯರಿಂಗ್ ನಾಲ್ಕನೇ ಸೆಮಿಸ್ಟರ್‌ನಲ್ಲಿದ್ದೆ. ಕೊಳಲನ್ನು ತೆಗೆದುಕೊಳ್ಳಲು ದುಡ್ಡಿರಲಿಲ್ಲ. ಅವರೇ ‘ನಾನು ದುಡ್ಡು ಕೊಡುವೆ’ ಎಂದು ಮೂರು ಸಾವಿರ ರೂಪಾಯಿ ಕೊಟ್ಟರು. ಆನಂತರ ನನ್ನ ವಿದ್ಯಾಭ್ಯಾಸಕ್ಕೆ ಹಣ ಕಳುಹಿಸಿದರು. ಸಂಗೀತ ಬದ್ಧತೆ, ಧ್ಯಾನವನ್ನು ಅವರಿಂದ ಅಪಾರವಾಗಿ ಕಲಿತೆ. ಆ್ಯಪ್‌ನ ಟಾಫ್ 10 ನಾದಗಳಲ್ಲಿ ನನ್ನ ನಾದಕ್ಕೂ ಸ್ಥಾನವಿದೆ. ‘ಜರ್ನಿ ವಿತ್ ಶಿವ’ ಮುಖ್ಯವಾದದ್ದು. ಇತ್ತೀಚೆಗೆ ಅಮೆರಿಕದಲ್ಲಿ ‘ರುದ್ರ’ ಲೋಕಾರ್ಪಣೆಗೊಂಡಿದ್ದು, ಭಾರತದ ಮಾರುಕಟ್ಟೆಗೂ ಶೀಘ್ರ ಬರಲಿದೆ. ನನ್ನ ಎಲ್ಲ ಸಾಧನೆಗಳ ಹಿಂದಿನ ಪ್ರೇರಕ ಶಕ್ತಿ ಚೌರಾಸಿಯಾ.

*ನಿಮ್ಮ ‘ಅಂತರ್ ದನಿ’ ಸಂಸ್ಥೆಯ ‘ವೇಣುಯಾತ್ರೆ’ ಮಕ್ಕಳಲ್ಲಿ ಸಂಗೀತಾಸಕ್ತಿ ಬೆಳೆಸುವಲ್ಲಿ ವಹಿಸುತ್ತಿರುವ ಪಾತ್ರವೇನು?
ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಂಗೀತಾಸಕ್ತಿ ಬೆಳೆಸಲು ಸಂಸ್ಥೆ ಮುಂದಾಗಿದೆ. ಸಿಂಧನೂರು ‘ಅಂತರ್ ದನಿ’ಯ ಪ್ರಧಾನ ನೆಲೆ. ಈಗ ಧಾರವಾಡದಲ್ಲಿ ಸಂಸ್ಥೆ ಆರಂಭವಾಗಿದೆ. ಪ್ರತಿ ತಿಂಗಳು ಅಲ್ಲಿ ಸೇರುತ್ತೇವೆ. ‘ವೇಣುಯಾತ್ರೆ’ ಹೆಸರಿನಲ್ಲಿ ಬಳ್ಳಾರಿ, ರಾಯಚೂರು, ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಗ್ರಾಮೀಣ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಸಂಗೀತದ ಬಗ್ಗೆ ಹೇಳಿಕೊಡುತ್ತಿದ್ದೇವೆ. ಶಾಲೆಗಳಿಗೆ ಪತ್ರ ಬರೆದು ನಮ್ಮ ಚಟುವಟಿಕೆಗಳ ಬಗ್ಗೆ ತಿಳಿಸುತ್ತೇವೆ. ಒಂದು ಗಂಟೆ ಮಕ್ಕಳಿಗೆ ಸಂಗೀತ ಕೇಳಿಸಿ, ಸಂವಾದ ನಡೆಸುತ್ತೇವೆ. ಶಿಕ್ಷಣ ಬುದ್ಧಿ ಕೇಂದ್ರಕ್ಕೆ ಸೀಮಿತವಾಗಿ, ಹೃದಯ ಕೇಂದ್ರಕ್ಕೆ ತಲುಪಬೇಕು ಎನ್ನುವುದೇ ಆಶಯ.

*ಉತ್ತರ ಕರ್ನಾಟಕ ಭಾಗವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?
ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಒಂದಿಲ್ಲೊಂದು ಸಂಗೀತ ಕಾರ್ಯಕ್ರಮ–ಕಛೇರಿಗಳು ನಡೆಯುತ್ತವೆ. ಆದರೆ ಉತ್ತರ ಕರ್ನಾಟಕದ ಮಕ್ಕಳಿಗೆ ಈ ಅವಕಾಶಗಳು ಕಡಿಮೆ. ನಮ್ಮ ಬಳಿಗೆ ಪ್ರತಿ ವರುಷ ವಿದೇಶಗಳಿಂದಲೂ ಗಾಯಕರು,- ಕಲಾವಿದರು ಬರುತ್ತಾರೆ. ಅವರಿಂದ ಹಳ್ಳಿಗಳಲ್ಲಿ ಕಾರ್ಯಕ್ರಮ ಕೊಡಿಸುತ್ತೇವೆ. ‘ಅಂತರ್ ದನಿ’ಯದು ವಿದ್ಯೆ ಹಂಚುವ ಜವಾಬ್ದಾರಿ.

*ಸಂಸ್ಥೆಯ ಆದಾಯದ ಮೂಲ?
ದಾನಿಗಳು ಮತ್ತು ಉಳ್ಳವರೇ ಸಂಸ್ಥೆಯ ಆದಾಯದ ಮೂಲ. ಒಬ್ಬ ಮೈಕು ಕೊಟ್ಟರೆ ಮತ್ತೊಬ್ಬರು ಸೌಂಡ್ ಸಿಸ್ಟಂ, ಮಗದೊಬ್ಬ ಶಾಮಿಯಾನ… ಹೀಗೆ ಸಹಕಾರದಡಿ ಕೆಲಸ ನಡೆಯುತ್ತದೆ.

*ಹೀಲಿಂಗ್ (ನಾದ ಚಿಕಿತ್ಸೆ) ಮತ್ತು ಮೆಡಿಟೇಶನ್‌ ಮ್ಯೂಸಿಕ್‌ ನಿಮ್ಮ ಆಯ್ಕೆಯಾಗಲು ಕಾರಣವೇನು?
ಪ್ರಪಂಚದಲ್ಲಿ 115 ವಿಧದ ನಾದಗಳಿವೆ. ಒಬ್ಬೊಬ್ಬರೂ ಒಂದು ಸ್ವರ–ನಾದಕ್ಕೆ ಬದ್ಧವಾಗಿರುತ್ತಾರೆ. ನನ್ನದು ಈ ಹಾದಿ. ಒತ್ತಡದ ಬದುಕಿನಿಂದ ಉತ್ತಮ ಬದುಕಿಗೆ ಕರೆದುಕೊಂಡು ಬರುವುದೇ ಈ ಸಂಗೀತದ ಮೂಲ ಮಂತ್ರ. ಇಲ್ಲಿ ಸಣ್ಣ ಶಬ್ದವೂ ಮನಸ್ಸನ್ನು ವಿಚಾರಶಕ್ತಿಗೆ ಉದ್ದೀಪಿಸುತ್ತದೆ, ಒತ್ತಡವನ್ನು ಹಗುರಗೊಳಿಸುತ್ತದೆ. ನಮ್ಮ ಶಾಸ್ತ್ರಗಳಲ್ಲಿನ ಸಂಗೀತವನ್ನು ವೈಜ್ಞಾನಿಕವಾಗಿ ಇಂದಿನ ಸಮುದಾಯಕ್ಕೆ ಮುಟ್ಟಿಸುತ್ತದೆ. ಈ ಯಾನದಲ್ಲಿ ಮಠಗಳನ್ನೂ ಒಳಗೊಳ್ಳುತ್ತಿದ್ದು, ಅಲ್ಲಿನ ಪರಂಪೆಯನ್ನು ಭಜನೆಯ ರೂಪಕ್ಕೆ ಇಳಿಸುತ್ತಿದ್ದೇವೆ. ಶಿಶುನಾಳ ಷರೀಫರು, ಕಬೀರ್ ದಾಸರು ಸೇರಿದಂತೆ ಬಹು ಮಂದಿ ಈ ದಿಸೆಯಲ್ಲಿ ಕಾರ್ಯತತ್ಪರರಾದವರೇ. ನಾನು ನಾನು ಹಳೆಯ ಮದ್ಯವನ್ನು ಹೊಸ ಬಾಟಲಿಗೆ ಸುರಿದಿದ್ದೇನೆ. ಒಂದಿಷ್ಟು ವೈಜ್ಞಾನಿಕವಾಗಿ ಸಂಸ್ಕರಿಸಿದ್ದೇನೆ, ಅಷ್ಟೆ! ಓಶೋ ಸಮಾಧಿಯಲ್ಲಿ ನಾನು ಕೊಟ್ಟ ಕಛೇರಿಯೇ ಬದುಕಿಗೆ ತಿರುವು ಕೊಟ್ಟಿದ್ದು. ಅಲ್ಲಿಂದಲೇ ಸಂಗೀತದ ಬಗ್ಗೆ ವಿಶೇಷವಾದ ಆಸ್ಥೆ ಮೂಡಿದ್ದು. ನಮ್ಮ ಸಂಸ್ಥೆಯಿಂದಲೇ 15 ಸಿ.ಡಿಗಳು ಹೊರಬಂದಿದೆ. ರಾಕ್‌, ಪಾಪ್ ಸೇರಿದಂತೆ ಪಾಶ್ಚಾತ್ಯ ಸಂಗೀತಕ್ಕೆ ಭಾರತದ ಮಂತ್ರ–ಅಧ್ಯಾತ್ಮದ ಸಂಗೀತವನ್ನು ಸೇರಿಸುವುದೇ ನಮ್ಮ ಮೂಲ ಪರಿಕಲ್ಪನೆ.

*ಮಠಗಳ ಒಳಗೊಳ್ಳುವಿಕೆ ಅಂದರೆ ಯಾವ ರೀತಿ?
ಇತ್ತೀಚೆಗೆ ಕೊಪ್ಪಳದ ಗವಿಮಠದಲ್ಲಿ ಜಾತ್ರೆ ನಡೆಯಿತು. ಅಲ್ಲಿನ ಮೂಲಪುರುಷರಾದ ಗವಿಸಿದ್ಧ ಎನ್ನುವುದನ್ನು ತೆಗೆದು ಭಜನೆಯನ್ನು ಸ್ಥಳದಲ್ಲಿಯೇ ಕಟ್ಟಿದೆವು. ಮೂರು ಲಕ್ಷ ಜನರು ಹಾಡಿದರು. ಹೀಗೆ ಆಯಾ ಸ್ಥಳೀಯ ಮಠಗಳಲ್ಲಿರುವ ವಚನ–ತತ್ವಗಳನ್ನು ನಾದರೂಪಕ್ಕೆ ಇಳಿಸುತ್ತೇವೆ.

*‘ಅಲ್ಲಮ’ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಆಯ್ಕೆಯಾದ ಅನುಭವ ಹೇಗಿತ್ತು?
ನಿರ್ದೇಶಕ ಟಿ.ಎಸ್‌. ನಾಗಾಭರಣ ಈ ಜವಾಬ್ದಾರಿ ವಹಿಸಿದ್ದಾರೆ. ಅಲ್ಲಮ ಭಾರತದ ಮುಖ್ಯ ಚಿಂತಕ. 12ನೇ ಶತಮಾನದ ಅನುಭಾವಿ ಅಲ್ಲಮನ್ನು ಈಗಿನ ಜನರಿಗೆ ಮುಟ್ಟಿಸುವುದು ಮುಖ್ಯ ಜವಾಬ್ದಾರಿ. ಇದು ಒಂದು ರೀತಿ ಸವಾಲು ಮತ್ತು ಉತ್ತಮ ಅವಕಾಶ ಸಹ. ಶಾಸ್ತ್ರ, ಅಧ್ಯಾತ್ಮ ಮತ್ತು ಆಧುನಿಕತೆ ಮೂರನ್ನು ಇಟ್ಟುಕೊಂಡು ಮುಂದುವರೆಯಬೇಕು.